ಗೀತಾಪ್ರವಚನ-ವಿನೋಬಾ ಬಾವೆ

 ಮಧ್ಯೇ ಮಹಾಭಾರತಂ

ಒಲವಿನ ತಮ್ಮಂದಿರೆ,


           ಇವತ್ತಿನಿಂದ ನಾನು ಶ್ರೀಮದ್ ಭಗವದ್ ಗೀತೆಯ ವಿಷಯ ಹೇಳುತ್ತೇನೆ. ಗೀತೆಗೂ ನನಗೂ ಇರುವ ಸಂಬಂಧ ತರ್ಕಕ್ಕೆ ಮೀರಿದ್ದು, ನನ್ನ ಮೈ ತಾಯ ಹಾಲಿನಿಂದ ಬೆಳೆದದೆ. ಅದಕ್ಕಿಂತ ಹೆಚ್ಚಾಗಿ ನನ್ನ ಮನಸ್ಸು ಗೀತೆಯ ಹಾಲಿನಿಂದ ಬೆಳೆದಿದೆ. ಎಲ್ಲಿ ಜೀವಾಳದ ಸಂಬಂಧ ಇರುತ್ತದೋ ಅಲ್ಲಿ ತರ್ಕಕ್ಕೆ ಎಡೆಯಿಲ್ಲ. ತರ್ಕವನ್ನುಳಿದು ಶ್ರದ್ಧೆ - ಪ್ರಯೋಗ ಈ ಎರಡು ರೆಕ್ಕೆಗಳನ್ನು ಕೆದರಿ ಗೀತಾಗಗನದಲ್ಲಿ ನಾನು ಯಥಾಶಕ್ತಿ ವಿಹರಿಸುತ್ತೇನೆ.  ಬಹುಶಃ ನಾನು ಗೀತೆಯ ವಾತಾವರಣದಲ್ಲೇ ಇದ್ದೇನೆ. ಗೀತೆಯೆಂದರೆ ನನ್ನ ಪ್ರಾಣ ತತ್ತ್ವ. ಗೀತೆಯ ಬಗ್ಗೆ ಯಾರಿಗಾದರೂ ನಾನು ಹೇಳಿದರೆ ಆಗ ಗೀತಾ ಸಮುದ್ರದ ಮೇಲೇ ತೇಲಾಡುತ್ತಿರುತ್ತೇನೆ. ನಾನೊಬ್ಬನೇ ಇದ್ದರೆ ಆ ಅಮೃತದ ಕಡಲಿನಲ್ಲಿ ಆಳವಾಗಿ ಮುಳುಗಿ ಕುಳಿತಿರುತ್ತೇನೆ. ಇಂಥ ಗೀತಾಮಾತೆಯ ಚರಿತ್ರೆಯನ್ನು ಪ್ರತಿ ಭಾನುವಾರ ನಾನು ಹೇಳಬೇಕೆಂದು ನಿರ್ಧಾರವಾಗಿದೆ.
                 ಗೀತೆಯನ್ನು ಮಹಾಭಾರತದಲ್ಲಿ ಯೋಜಿಸಿದ್ದಾರೆ. ಮಹಾಭಾರತದ ನಟ್ಟನಡುವೆ ಭಾರತದ ಎಲ್ಲೆಡೆಗೂ ಬೆಳಕು ಬೀರುವ ಎತ್ತರವಾದ ದೀಪದಂತೆ ಇದೆ - ಗೀತೆ. ಒಂದು ಕಡೆ 6 ಪರ್ವ, ಇನ್ನೋಂದು ಕಡೆ 12 ಪರ್ವ, ಇದರ ನಡುವೆ ಒಂದು ಕಡೆ 7 ಅಕ್ಷೋಹಿಣಿ ಸೇನೆ, ಇನ್ನೋಂದು ಕಡೆ 11 ಅಕ್ಷೋಹಿಣಿ ಸೇನೆ - ಹೀಗೆ ನಟ್ಟನಡುವೆ ಗೀತೆ ಉಪದೇಶಿತವಾಗುತ್ತದೆ.
             ಮಹಾಭಾರತ ರಾಮಾಯಣಗಳು ನಮ್ಮ ರಾಷ್ಟ್ರೀಯ ಗ್ರಂಥಗಳು. ಅವುಗಳಲ್ಲಿ ವರ್ಣಿಸಿದ ವ್ಯಕ್ತಿಗಳು ನಮ್ಮ ಬಾಳಿನಲ್ಲಿ ಐಕ್ಯವಾಗಿದಾರೆ. ರಾಮ-ಸೀತೆ, ಧರ್ಮರಾಯ-ದ್ರೌಪದಿ, ಭೀಷ್ಮ-ಹನುಮಂತರೇ ಮೊದಲಾದವರು ಸಾವಿರಾರು ವರ್ಷಗಳಿಂದ ಸಮಸ್ತ ಭಾರತೀಯ ಜೀವನದ ಮನ ಸೆಳೆದಿದ್ದಾರೆ. ಜಗತ್ತಿನ ಇತರ ಮಹಾ ಕಾವ್ಯಗಳ ಪಾತ್ರಗಳು ಯಾವುವೂ ಹೀಗೆ ಜನಜೀವನದಲ್ಲಿ ಬೆರೆತುಹೋದಂತೆ ಕಾಣುವುದಿಲ್ಲ. ಈ ದೃಷ್ಟಿಯಿಂದ ಮಹಾಭಾರತ ರಾಮಾಯಣಗಳು ನಿಸ್ಸಂದೇಹವಾಗಿ ಅದ್ಭುತ ಗ್ರಂಥಗಳು. ರಾಮಾಯಣ ಮಧುರ ನೀತಿಕಾವ್ಯ, ಮಹಾಭಾರತ ವ್ಯಾಪಕ ಸಮಾಜಶಾಸ್ತ್ರ. ವ್ಯಾಸರು ಒಂದು ಲಕ್ಷ್ಯ ಸಂಹಿತೆಯನ್ನು ಬಹು ಕೌಶಲದಿಂದ ಯಥಾವತ್ ರೂಪಿಸಿದ್ದಾರೆ. ಲೋಕದಲ್ಲಿ ಕೇವಲ ನಿರ್ದೋಷವಾದುದೆಂದರೆ ದೇವರೊಬ್ಬನೇ. ಹಾಗೆಯೇ ಬರೀ ದೋಷಪೂರ್ಣವಾದುದೂ ಯಾವುದೂ ಇಲ್ಲ. ಇದನ್ನು ಮಹಾಭಾರತ ಸ್ಪಷ್ಟವಾಗಿ ತಿಳಿಸುತ್ತದೆ. ಭೀಷ್ಮ ಯುಧಿಷ್ಠಿರರಂಥವರಲ್ಲಿಯೂ ದೋಷಗಳನ್ನು ತೋರಿಸಲಾಗಿದೆ. ಇದಕ್ಕೆ ಪ್ರತಿಯಾಗಿ ಕರ್ಣ ದುರ್ಯೋಧನರ ಗುಣವನ್ನೂ ಪ್ರಕಟಿಸಿದ್ದಾರೆ. ಮಾನವನ ಬಾಳು ಕರಿ-ಬಿಳಿ ದಾರಗಳಿಂದ ನೇದ ಬಟ್ಟೆ ಎಂಬುದನ್ನು ಮಹಾಭಾರತ ನಿಚ್ಚಳ ಮಾಡಿ ತಿಳಿಸುತ್ತದೆ. ತಾವು ಅಲಿಪ್ತರಾಗಿದ್ದು ಭಗವಾನ್ ವ್ಯಾಸರು ಈ ವಿರಾಟ್ ಪ್ರಪಂಚದ ನೆರಳು-ಬೆಳಕಿನ ಚಿತ್ರವನ್ನು ತೋರಿಸಿದ್ದಾರೆ. ವ್ಯಾಸರ ಈ ಅಲಿಪ್ತ ಉದಾತ್ತ ಗ್ರಂಥರಚನಾಕೌಶಲದಿಂದ ಮಹಾಭಾರತ ಬಂಗಾರದ ಗಣಿಯಾಗಿದೆ. ಸೋಸಿ ತೆಗೆದು ತೆಕ್ಕೆ ತುಂಬಾ ಬಂಗಾರವನ್ನು ಒಯ್ಯಬಹುದು.
                  ವ್ಯಾಸರು ಇಂಥ ಮಹಾಭಾರತವನ್ನೋನೋ ಬರೆದರು, ಆದರೆ ಅವರ ಸಂದೇಶ ಎಂದು ಹೇಳಬೇಕಾದುದು ಅವರಿಗೆ ಏನು ಇರಲಿಲ್ಲವೇ ? ತಮ್ಮದು ಈ ಉಪದೇಶ ಎಂದು ಎಲ್ಲಾದರೂ ಹೇಳಿದ್ದಾರೆಯೇ ? ವ್ಯಾಸರಿಗೆ ಎಲ್ಲಿ ಸಮಾಧಿ ಬಂದಿದೆ ? ಬೇರೆ ಬೇರೆ ಕಡೆ ಹೊರೆ ಹೊರೆಯಾಗಿ ತತ್ತ್ವಜ್ಞಾನ ಮಹಾಭಾರತದಲ್ಲೆಲ್ಲಾ ಬಂದಿದೆ. ಆದರೆ ಈ ಎಲ್ಲಾ ತತ್ತ್ವಜ್ಞಾನದ ಉಪದೇಶದ ಸಾರಸರ್ವಸ್ವವನ್ನು ಎಲ್ಲಾದರೂ ಒತ್ತಟ್ಟಿಗೆ ವ್ಯಾಸರು ಇಟ್ಟಿಲ್ಲವೇ ? ಇಟ್ಟಿದ್ದಾರೆ. ಸಮಗ್ರ ಭಾರತದ ನವನೀತವನ್ನು ವ್ಯಾಸರು ಭಗವದ್ಗೀತೆಯಲ್ಲಿ ಕೊಟ್ಟಿದ್ದಾರೆ. ಗೀತೆ ವ್ಯಾಸರ ಮುಖ್ಯ ಉಪದೇಶ, ಅವರ ಮನನದ ಸಾರಸಂಗ್ರಹ. ಇದರಿಂದಲೇ "ಮುನಿನಾಮಪಿ ಅಹಂ ವ್ಯಾಸಃ" ಎಂದು ವಿಭೂತಿಯೋಗದಲ್ಲಿ ಅರ್ಥಪೂರ್ಣವಾಗಿ ಹೇಳಿದೆ. ಪ್ರಾಚೀನಕಾಲದಿಂದಲೂ ಗೀತೆಗೆ ಉಪನಿಷತ್ತು ಎಂಬ ಗೌರವ ಸಂದಿದೆ. ಗೀತೆ ಉಪನಿಷತ್ತುಗಳ ಉಪನಿಷತ್ತು. ಸರ್ವ ಉಪನಿಷತ್ತುಗಳನ್ನು ಹಿಂಡಿ ಗೀತಾರೂಪದಲ್ಲಿ ಆ ಹಾಲನ್ನು ಭಗವಂತ ಲೋಕಕ್ಕೆ ನೀಡಿದ್ದಾನೆ. ಅರ್ಜುನ ಬರೀ ನಿಮಿತ್ತ ಮಾತ್ರ. ಬಾಳಿನ ವಿಕಾಸಕ್ಕೆ ಅಗತ್ಯವಾದ ಪ್ರತಿಯೊಂದು ವಿಚಾರವೂ ಬಹುಶಃ ಗೀತೆಯಲ್ಲಿ ಬಂದೇ ಇದೆ.  ಆದುದರಿಂದಲೇ ಗೀತೆ ಧರ್ಮಜ್ಞಾನದ ಕೋಶ ಎಂದು ಅನುಭವಿಗಳು ಯಥಾರ್ಥವಾಗಿ ಹೇಳಿದ್ದಾರೆ. ಗೀತೆ ಚಿಕ್ಕದು ಆದರೆ ಹಿಂದೂ ಧರ್ಮದ ಮಹಾಗ್ರಂಥ !
            ಗೀತೆಯನ್ನು ಹೇಳಿದುದು ಶ್ರೀ ಕೃಷ್ಣ. ಇದು ಎಲ್ಲರಿಗೂ ಗೊತ್ತಿದೆ. ಈ ಮಹಾ ಉಪದೇಶ ಪಡೆದ ಭಕ್ತ ಅರ್ಜುನ ಅದರಲ್ಲಿ ಬೆರೆತುಹೋದ. ಅಂತೇ ಅವನಿಗೂ ಕೃಷ್ಣ ಎಂಬ ಹೆಸರು ಬಂತು. ಭಗವಂತ-ಭಕ್ತರ ಹೃದ್ಗತವನ್ನು ಪ್ರಕಟಪಡಿಸುವಾಗ ವ್ಯಾಸದೇವ ಪೂರಾ ಕರಗಿಹೋಗಿದ್ದಾನೆ. ಲೋಕ ಆತನನ್ನು ಕೃಷ್ಣನೆಂದು ಕರೆವಷ್ಟು ಮಟ್ಟಿಗೆ ಆಗಿದೆ. ಹೇಳುವವನು ಕೃಷ್ಣ, ಕೇಳುವವನು ಕೃಷ್ಣ. ಕಟ್ಟುವವನು ಕೃಷ್ಣ.... ಹೀಗೆ ಮೂವರಲ್ಲೂ ಒಂದೇ ಅದ್ವೈತ ಮೂಡಿತು. ಮೂವರಿಗೂ ಸಮಾಧಿ ಹತ್ತಿತು. ಗೀತೆಯನ್ನು ಅಭ್ಯಸಿಸುವಾಗ ಇಂಥ ಏಕಾಗ್ರತೆ ಬರಬೇಕು.
2 ಅರ್ಜುನನ ಭೂಮಿಕೆಯ ಸಂಬಂಧ
          ಗೀತೆ ಎರಡನೆಯ ಅಧ್ಯಾಯದಿಂದ ಮೊದಲಾಗಬೇಕಾಗಿತ್ತು ಎಂದು ಎಷ್ಟೋ ಜನರಿಗೆ ಅನಿಸುತ್ತದೆ. ಎರಡನೆಯ ಅಧ್ಯಾಯದ 11 ನೇ ಶ್ಲೋಕದಿಂದ ಪ್ರತ್ಯಕ್ಷ ಉಪದೇಶ ಪ್ರಾರಂಭವಾಗುತ್ತದೆ. ಅಲ್ಲಿಂದಲೇ ಗೀತೆ ಪ್ರಾರಂಭ ಎಂದರೆ ಏನು ತಪ್ಪು ? ನನಗೊಬ್ಬರು ಹೇಳಿದರು: “ಅಕ್ಷರಗಳಲ್ಲಿ ಅ ಕಾರವೇ ಈಶ್ವರೀ ವಿಭೂತಿ ಎಂದು ದೇವರು ಹೇಳಿದ್ದಾನೆ. ಅಶೋಚ್ಯಾನನ್ವಶೋಷಸ್ತ್ವಂ” ಎಂಬ ಶ್ಲೋಕದ ಆದಿಯಲ್ಲೂ ಅ ಕಾರವಿದೆ ಆದ್ದರಿಂದ ಅಲ್ಲಿಂದಲೇ ಗೀತೆ ಆರಂಭವಾಗಿದೆ” ಈ ತರ್ಕವನ್ನು ತಳ್ಳಿಹಾಕಿದರೂ ಇಲ್ಲಿ ಗೀತೆ ಆರಂಭ ಎಂಬುದು ಅನೇಕ ದೃಷ್ಟಿಗಳಿಂದ ಗಮನೀಯವಾಗಿದೆ. ಆದರೆ ಅದಕ್ಕೆ ಹಿಂದಿನ ಪ್ರಾಸ್ತಾವಿಕ ಭಾಗವೂ ಮಹತ್ವದ್ದೇ. ಅರ್ಜುನ ಯಾವ ಮನೋಭಾವದಲ್ಲಿ ಇದ್ದಾನೆ, ಯಾವ ಮಾತನ್ನು ಹೇಳಲು ಗೀತೆ ಹುಟ್ಟಿತು ಅದನ್ನು ಆ ಪ್ರಸ್ತಾವನೆ ಓದದೆ ಅರಿಯಾಗಿ ಅರಿಯುವುದು ಕಷ್ಟ.
          ಅರ್ಜುನನ ಕ್ಲೈಬ್ಯವನ್ನು ಕಳೆದು, ಅವನನ್ನು ಯುದ್ಧ ಪ್ರವೃತ್ತನನ್ನಾಗಿ ಮಾಡಲು ಗೀತೆ ಹೇಳಲ್ಪಟ್ಟಿತು ಎಂದು ಕೆಲವರು ಹೇಳುತ್ತಾರೆ. ಅವರ ಅಭಿಪ್ರಾಯದಲ್ಲಿ ಗೀತೆ ಕರ್ಮಯೋಗವನ್ನು ಮಾತ್ರ ಹೇಳುವಂಥದಲ್ಲ. ಯುದ್ಧ-ಯೋಗವನ್ನು ಹೇಳುವಂಥದ್ದು. ವಿಚಾರ ಮಾಡಿದರೆ ಈ ಮಾತಿನಲ್ಲಿರುವ ತಪ್ಪು ಕಾಣಬರುತ್ತದೆ. 18 ಅಕ್ಷೋಹಿಣೀ ಸೇನೆ ಯುದ್ಧ ಸನ್ನದ್ಧವಾಗಿದೆ. ಆ ಸೇನೆಗೆ ಅರ್ಜುನನನ್ನು ಯೋಗ್ಯನನ್ನಾಗಿ ಮಾಡಿತು ಗೀತೆ ಎಂದೇ ಅಭಿಪ್ರಾಯ ? ಅರ್ಜನ ಹೆದರಿದ, ಆ ಸೇನೆ ಎದರಿರಲಿಲ್ಲ. ಇದರಿಂದ ಅರ್ಜುನನಿಗಿಂತ ಆ ಸೇನೆ ಹೆಚ್ಚು ಯೋಗ್ಯವಾದುದು ಎನ್ನೋಣವೇ ? ಈ ಕಲ್ಪನೆಯೇ ಬಾರದು. ಅರ್ಜುನ ಯುದ್ಧ ಮಾಡಲು ಹಿಂಜರಿದ, ಆದರೆ ಅಂಜಿ ಅಲ್ಲ. ನೂರಾರು ಯುದ್ಧ ಮಾಡಿದ ವೀರ ಅವನು. ಉತ್ತರ ಗೋ ಗ್ರಹಣದಲ್ಲಿ ಭೀಷ್ಮ, ದ್ರೋಣ, ಕರ್ಣರನ್ನು ಒಬ್ಬನೇ ಸೋಲಿಸಿದ್ದ. ಸದಾ ವಿಜಯವಂತ, ನರರಲ್ಲಿ ನಿಜವಾದ ನರ ಇವನೇ ಎಂಬ ಕೀರ್ತಿಯಿತ್ತು. ಅವನ ರೋಮರೋಮದಲ್ಲೂ ವೀರವೃತ್ತಿ ತುಳುಕುತ್ತಿತ್ತು. ಅರ್ಜುನನನ್ನು ಹೀನೈಸಲಿಕ್ಕೆಂದು ಕೆಣಕಲೆಂದು ಶ್ರೀಕೃಷ್ಣನೇ ಮೊಟ್ಟ ಮೊದಲು ಈ ಕ್ಲೈಬ್ಯದ ಆರೋಪವನ್ನು ಹೊರಿಸಿದನು. ಆ ಬಾಣ ಗುರಿಗೆ ತಾಕಲಿಲ್ಲವೆಂದು ಬೇರೆ ದಾರಿ ತೆಗೆದು ಜ್ಞಾನ ವಿಜ್ಞಾನದ ಬಗ್ಗೆ ಅನೇಕ ವ್ಯಾಖ್ಯಾನ ಮಾಡತೊಡಗಿದ. ಅವನ ಕ್ಲೈಬ್ಯವನ್ನು ನಿರಸನ ಮಾಡುವುದೇ ಗೀತೆಯ ತಾತ್ಪರ್ಯವಲ್ಲ.

          ಇನ್ನೂ ಕೆಲವರು ಹೇಳುತ್ತಾರೆ: ಅರ್ಜುನನ ಅಹಿಂಸಾವೃತ್ತಿಯನ್ನು ಕಳೆದು ಅವನನ್ನು ಯುದ್ಧ ಪ್ರವೃತ್ತನನ್ನಾಗಿ ಮಾಡಲು ಗೀತೆ ಹೇಳಲ್ಪಟ್ಟಿತು. ಇದೂ ಸರಿಯಲ್ಲವೆಂದು ನನಗನಿಸುತ್ತದೆ. ಇದನ್ನು ತಿಳಿಯಲು ಅರ್ಜುನನ ಮನೋಧರ್ಮವನ್ನು ಪರಿಶೀಲಿಸಬೇಕು. ಇದಕ್ಕೆ ಗೀತೆಯ ಮೊದಲನೆಯ ಅಧ್ಯಾಯವೂ, ಎರಡನೆಯದರೊಳಗೆ ಹೊಕ್ಕಿರುವ ಆ ಭಾಗವೂ ಅತ್ಯಂತ ಪ್ರಯೋಜನಕಾರಿ.
          ಅರ್ಜುನ ರಣಾಂಗಣದಲ್ಲಿ ಬಂದು ನಿಂತಾಗ ಕೃತನಿಶ್ಚಯನಾಗಿ ಕರ್ತವ್ಯಜ್ಞಾನವುಳ್ಳವನಾಗಿ ಒಂದು ನಿಂತ. ಅವನ ಸ್ವಭಾವದಲ್ಲಿಯೇ ಇತ್ತು ಕ್ಷಾತ್ರವೃತ್ತಿ. ಯುದ್ಧವನ್ನು ತಡೆಯಲು ಸರ್ವ ಪ್ರಯತ್ನಮಾಡಿದರೂ ಅದು ತಪ್ಪಲಿಲ್ಲ. ತೀರಾ ಕಡಿಮೆ ಬೇಡಿಕೆ, ಕೃಷ್ಣನಂಥವನ ಮಧ‍್ಯಸ್ಥಿಕೆ, ಎರಡು ವ್ಯರ್ಥವಾದವು. ಅಂಥ ಸಂಧರ್ಭದಲ್ಲಿ ದೇಶ ದೇಶದ ರಾಜರನ್ನು ಕಲೆಹಾಕಿ, ಕೃಷ್ಣನನ್ನು ಸಾರಥಿಯನ್ನಾಗಿ ಪಡೆದು ತಂದು, ರಣಾಂಗಣದಲ್ಲಿ ನಿಂತು ಅರ್ಜುನ ವೀರವೃತ್ತಿಯ ಹುರುಪಿನಿಂದ ಕೃಷ್ಣನಿಗೆ ಹೇಳುತ್ತಾನೆ; “ಎರಡು ಸೇನೆಯ ಮಧ‍್ಯೆ ನನ್ನ ರಥವನ್ನು ನಲ್ಲಿಸು, ನನ್ನೊಡನೆ ಯುದ್ಧ ಮಾಡಲು ಯಾರು ಯಾರು ಬಂದು ಸೇರಿದ್ದಾರೋ ಅವರ ಮೋರೆಗಳನ್ನಾದರೂ ಒಮ್ಮೆ ನೋಡುತ್ತೇನೆ.” ಕೃಷ್ಣ ಅವನು ಹೇಳಿದಂತೆ ಮಾಡುತ್ತಾನೆ. ಅರ್ಜುನ ನಾಲ್ಕೂ ಕಡೆಗೂ ಕಣ್ಣು ಹೊರಳಿಸಿ ನೋಡುತ್ತಾನೆ. ಅಲ್ಲಿ ಅವನಿಗೆ ಕಂಡದ್ದೇನು ? ಎರಡೂ ಕಡೆ ತನ್ನ ಅಣ್ಣ ತಮ್ಮಂದಿರ ಬಂಧು, ಬಳಗದ ಪ್ರಚಂಡ ಸಮೂಹ ಸೇರಿದೆ. ತಾತ, ತಂದೆ, ಮಕ್ಕಳು, ಮೊಮ್ಮಕ್ಕಳು, ಹೀಗೆ ನಾಲ್ಕು ತಲೆಮಾರಿನ ಜನ ಮರಣ-ಮಾರಣದ ಕೊನೆಯ ನಿರ್ಧಾರ ಮಾಡಿ ಸೇರಿದಂತೆ ಅವನಿಗೆ ಕಾಣುತ್ತದೆ. ಅದಕ್ಕೆ ಮೊದಲು ಅವನಿಗೆ ಈ ಚಿತ್ರ ಹೊಳಿದಿರಲಿಲ್ಲವೆಂದಲ್ಲ. ಆದರೆ ಕಣ್ಣಾರೆ ಕಂಡಾಗ ಅದರ ಪರಿಣಾಮವೇ ಬೇರೆ, ಈ ಸ್ವಜನ ಸಮೂಹವನ್ನು ನೋಡಿ ಅವನ ಎದೆ ತಳಮಳಿಸಿ ಹೋಯಿತು. ಅವನಿಗೆ ಬಹಳ ಕೆಡುಕು ಎನಿಸಿತು. ಅಂದಿನವರೆಗೆ ಅವನು ಎಷ್ಟೋ ಯುದ್ಧ ಮಾಡಿದ್ದ, ಎಷ್ಟೋ ಜನ ವೀರರನ್ನು ಕೊಂದಿದ್ದ. ಆಗ ಅವನಿಗೆ ಕೆಡುಕೆನಿಸಿರಲಿಲ್ಲ, ಅವನ ಗಾಂಡೀವ ಜಾರಿ ಬೀಳಲಿಲ್ಲ, ಅವನ ಮೈ ನಡುಗಲಿಲಲ್ಲ. ಅವನ ಕಣ್ಣು ತೇವವಾಗಲಿಲ್ಲ. ಅಂಥದ್ದು ಈಗೇನು ಬಂತು ? ಈ ಗ ಹೀಗೇಕೆ ? ಅಶೋಕನ ಹಾಗೆ ಇವನಲ್ಲೂ ಅಹಿಂಸೆಯ ಉದಯವಾಯಿತೇ ? ಇಲ್ಲ. ಇದೆಲ್ಲ ಬರೀ ಸ್ವಜನಾಸಕ್ತಿ. ತನ್ನಿದಿರನಲ್ಲಿ ಇದೇ ಗಳಿಗೆಯಲ್ಲಿ ಗುರು-ಬಂಧು-ಬಳಗ ಅಲ್ಲದೆ ಬೇರೆ ವೈರಿಗಳಿದ್ದರೆ ಅವರ ತಲೆಗಳನ್ನು ನಿಸ್ಸಂಕೋಚವಾಗಿ ಅವನು ಚಂಡಾಡುತ್ತಿದ್ದ. ಆದರೆ ಆಸಕ್ತಿಜನ್ಯಮೋಹ ಅವನ ಕರ್ತವ್ಯನಿಷ್ಠೆಯನ್ನು ನುಂಗಿತು. ಸಾಲದುದಕ್ಕೆ ತತ್ತ್ವಜ್ಞಾನವನ್ನು ಬೇರೆ ಜೋಡಿಸಿದ. ಮೋಹಗ್ರಸ್ತನಾದರೂ ಪೂರ್ಣ ಕರ್ತವ್ಯಭ‍್ರಷ್ಟನಾಗುವುದು ಕರ್ತವ್ಯನಿಷ್ಠನಾದವನ ಮನಸ್ಸಿಗೆ ಒಗ್ಗದು. ಅದಕ್ಕೆ ಅವನು ಯಾವುದಾದರೂ ಒಂದು ಸದ್ವಿಚಾರದ ಮುಸುಕು ಹಾಕುತ್ತಾನೆ. ಅರ್ಜುನನದೂ ಹೀಗೆ ಆಯಿತು. ಯುದ್ಧವೇ ಪಾಪಕಾರ್ಯ ಎಂದು ಅರ್ಜುನ ಸುಳ್ಳು ವಾದ ಮಾಡಿದ. ಯುದ್ಧದಿಂದ ಕುಲಕ್ಷಯವಾದೀತು, ಧರ್ಮ ಲೋಪೀಸೀತು, ಸ್ವೈರಾಚಾರದ ಹರಡೀತು, ವ್ಯಭಿಚಾರ ಹಬ್ಬೀತು, ಬರಗಾಲ ಕವಿದೀತು. ಸಮಾಜ ಸಂಕಟದಲ್ಲಿ ಮುಳುಗೀತು - ಹೀಗೆ ಏನೇನೋ ಹೇಳಿ ಶ್ರೀಕೃಷ್ಣನನ್ನು ಒಪ್ಪಿಸಲು ಪ್ರಯತ್ನಿಸಿದ.

          



No comments:

Post a Comment